ಗ್ರಾಮ ಸಮಾಜ -
ಮೇಲುನೋಟಕ್ಕೆ ಗ್ರಾಮ ಸಮಾಜ ಅತಿ ಪರಿಚಿತವೆಂದು ಕಂಡರೂ ಅದಕ್ಕೊಂದು ತೃಪ್ತಿಕರವಾದ ವ್ಯಾಖ್ಯೆಯನ್ನು ಕೊಡುವುದು ಕಷ್ಟ. 1929ರ ಸುಮಾರಿಗೆ ಬರೆಯುತ್ತ ಕಾರ್ಲ್ ಜಿûಮ್ಮರ್‍ಮನ್ ಗ್ರಾಮ ಸಮಾಜವೆಂದರೆ ನಿಸರ್ಗದ ಮಡಿಲಲ್ಲಿ ಬಾಳುವ ಜನರೆಂದೂ ಇಲ್ಲವೆ ಮುಖ್ಯವಾಗಿ ಕೃಷಿಯನ್ನೇ ಉದ್ಯೋಗವಾಗಿಟ್ಟುಕೊಂಡ ಜನರ ಗುಂಪೆಂದೂ ಇಲ್ಲವೆ ಚಿಕ್ಕ ಗಾತ್ರದ ಸಮಾಜಗಳೆಂದೂ ಹೇಳಿದ್ದಾನೆ. ಕೃಷಿ ಉದ್ಯೋಗಗಳು ಪ್ರಾಧಾನ್ಯ ಪಡೆದಿರುವುದು, ಮಾನವ ಆವರಣಕ್ಕಿಂತ ನೈಸರ್ಗಿಕ ಆವರಣಕ್ಕೆ ಜನ ಹೆಚ್ಚು ನಿಕಟವಾಗಿರುವುದು, ಸಮುದಾಯಗಳ ಗಾತ್ರ ಚಿಕ್ಕದಾಗಿರುವುದು, ಜನಸಾಂದ್ರತೆ ವಿರಳವಾಗಿರುವುದು, ಸಾಮಾಜಿಕ ಸಮೈಕ್ಯ ಹೆಚ್ಚಾಗಿರುವುದು, ಸ್ತರೀಕರಣ ಹಾಗೂ ಭಿನ್ನತೆಗಳು ಕಡಿಮೆಯಾಗಿರುವುದು, ಸಾಮಾಜಿಕ ಸಂಚರಣೆ ಕನಿಷ್ಠವಾಗಿರುವುದು - ಇವು ಗ್ರಾಮ ಸಮಾಜದ ಲಕ್ಷಣಗಳೆಂದು ಆತನ ಅಭಿಪ್ರಾಯ. ಲೂಯಿ ವರ್ತ್ ಎಂಬಾತ ಗ್ರಾಮ ಸಮಾಜಗಳೆಂದರೆ ಚಿಕ್ಕ ಗಾತ್ರದ, ಕಡಿಮೆ ಜನಸಾಂದ್ರತೆಯ ಮತ್ತು ಸಮೈಕ್ಯವುಳ್ಳ ಸಮಾಜಗಳೆಂದು ವರ್ಣಿಸಿದ್ದಾನೆ. ರೆಡ್‍ಫೀಲ್ಡ್ ಎಂಬಾತ ಗ್ರಾಮ ಸಮಾಜ ಚಿಕ್ಕ ಗಾತ್ರದ, ಪ್ರತ್ಯೇಕವಾಗಿ ಬಾಳುವ ಅನಕ್ಷರಸ್ಥ ಮತ್ತು ಏಕರೂಪತೆಯುಳ್ಳ ಹಾಗೂ ತೀವ್ರವಾದ ಏಕತೆಯ ಭಾವನೆಯನ್ನು ತಾಳಿದ ಜನರ ಸಮಾಜವೆಂದು ಹೇಳಿದ್ದಾನೆ.

ಗ್ರಾಮ ಸಮಾಜಕ್ಕೆ ಇನ್ನೂ ಕೆಲವು ಲಕ್ಷಣಗಳನ್ನು ಗುರುತಿಸಿದವರಿದ್ದಾರೆ. ಸ್ವಯಂಪರಿಪೂರ್ಣತೆ, ಸಂಪ್ರದಾಯಗಳ ಮೇಲುಗೈ, ಸಹಕಾರ ಭಾವನೆ, ನೆಲದ ಮೇಲಿರುವ ಅಪಾರಪ್ರೇಮ, ವೈಯಕ್ತಿಕ ಸಂಬಂಧಗಳ ಅಧಿಕ್ಯ, ಸರಳ ಹಾಗೂ ಮಿತವ್ಯಜೀವನ, ಧಾರ್ಮಿಕ ಭಾವನೆ, ಕಳ್ಳುಬಳ್ಳಿಗಳಿಗೆ ಅಥವಾ ರಕ್ತಸಂಬಂಧಿಗಳಿಗೆ ಸಿಗುವ ಮಹತ್ತ್ವ, ಸ್ತ್ರೀಗೆ ಸಿಗುವ ಹೀನಸ್ಥಾನಮಾನ, ಗ್ರಾಮೀಣ ಮೂಢ ನಂಬಿಕೆಗಳು ರೋಗರುಜಿನಗಳು, ಅಜ್ಞಾನ - ಹೀಗೆ ಇನ್ನೂ ಕೆಲವಿದೆ. ಇವುಗಳಲ್ಲಿ ಕೆಲವು ಅವಶ್ಯಕ ಲಕ್ಷಣಗಳಾದರೆ ಮತ್ತೆ ಕೆಲವು ಆಕಸ್ಮಿಕ ಅಥವಾ ಆನುಷಂಗಿಕ.

ಸಮಾಜಶಾಸ್ತ್ರಜ್ಞ ಸೊರೊಕಿನ್ನನೂ ಜಿಮ್ಮರಮನ್ನನೂ ಗ್ರಾಮ ಸಮಾಜದ ಪ್ರಧಾನ ಮಾನದಂಡ ಉದ್ಯೋಗ ಎಂದಿದ್ದಾರೆ. ಕೃಷಿಯೇ ಅದರ ಮೂಲಾಧಾರ. ಗ್ರಾಮೀಣ ಹಾಗೂ ಕೃಷಿಕ ಶಬ್ದಗಳು ಪರ್ಯಾಯವಾಚಕ ಎಂದರೂ ತಪ್ಪಲ್ಲ. ಕೃಷಿ ಕೇವಲ ಉದ್ಯೋಗವಲ್ಲ. ಅದು ಒಂದು ಜೀವನಮಾರ್ಗ. ಭೂಮಿತಾಯಿ ನೆಲದ ತುಣುಕೊಂದನ್ನು ಮಾರುವ ಪ್ರಸಂಗ ಬಂದಾಗ ಒಕ್ಕಲಿಗನ ಮನೆಯ ಜನರೆಲ್ಲೊ ಅನೇಕ ದಿನಗಳ ವರೆಗೆ ಗೋಳಿಡುವುದನ್ನು ನೋಡಿದಾಗ ಈ ಮಾತಿನ ಅರ್ಥವಾದೀತು. ಬೇಸಾಯಗಾರನ ಜೀವನ ನೆಲದ ಸುತ್ತ ಹೆಣೆದುಕೊಂಡಿದೆ. ಇದೇ ಕಾರಣಕ್ಕಾಗಿಯೇ ಇಲ್ಲಿ ನಿಸರ್ಗಕ್ಕೆ ಮೇಲುಗೈ. ಗ್ರಾಮ ಸಮಾಜದಲ್ಲಿ ಕೆಲವೇ ಕೆಲವರು ಒತ್ತೊಟ್ಟಿಗೆ ಇರುವದರಿಂದ ವೈಯಕ್ತಿಕ ಸಂಬಂಧಗಳು ಬೆಳೆಯುವುದು ಸಹಜ. ಹೀಗೆ ಗ್ರಾಮ ಸಮಾಜ ಕೃಷಿ ಪ್ರಧಾನವಾದುದು.

ಹೀಗಿದ್ದರೂ ಕೃಷಿಯಲ್ಲದ ಇತರ ಉದ್ಯೋಗಗಳಿರುವ ಸಮುದಾಯಗಳನ್ನೂ ಗ್ರಾಮ ಸಮಾಜದಲ್ಲಿ ಸೇರಿಸುವುದಿದೆ. ಆದಿವಾಸಿಗಳ ನೆಲೆಗಳೂ ಹೊಲಗಳ ಮಧ್ಯ ಇರುವ ಒಂದೆರಡು ಮನೆಗಳಿರುವ ಕೃಷಿ ಗ್ರಾಮಗಳೂ ಕೃಷಿಕರೇ ತುಂಬಿರುವ ಜನನಿಬಿಡ ಗ್ರಾಮಗಳೂ ಗಣಿಗ್ರಾಮಗಳೂ ಬೆಸ್ತರ ಹಳ್ಳಿಗಳೂ ವಿವಿಧ ಕಸಬಿನವರ ಹಳ್ಳಿಗಳೂ ವಿವಿಧ ಜಾತಿಗಳೂ ವೃತ್ತಿಗಳೂ ನೆಲೆಸಿರುವ ಭಾರತದ ವಿಶಿಷ್ಟ ಗ್ರಾಮಗಳೂ ಮರುಭೂಮಿಯ ಅರಬರ ವಿಶಿಷ್ಟ ಆಶ್ರಯಗಳೂ ಹಿಮಸಾರಂಗದೊಡನೆ ಸಂಚರಿಸುವ ಜನರ ನೆಲೆಗಳೂ ಕುರುಬರ ಅಥವಾ ಗೋಪಾಲಕರ ಹಳ್ಳಿಗಾಡುಗಳೂ ಗ್ರಾಮ ಸಮಾಜದ ವಿವಿಧ ಉದಾಹರಣೆಗಳು.

ಇತ್ತೀಚೆಗೆ ಗ್ರಾಮೀಣ ಸಮಾಜಗಳನ್ನು ಗುರುತಿಸುವಲ್ಲಿ ಹೆಚ್ಚಾಗಿ ಜನಸಂಖ್ಯೆಯ ಮಾನದಂಡವನ್ನು ಬಳಸುತ್ತಿದ್ದಾರೆ. ಪ್ರತಿಯೊಂದು ದೇಶವೂ ತನ್ನದೇ ಆದ ಸೂಚ್ಯಂಕವನ್ನು ಬಳಸುತ್ತದೆ. ಭಾರತದ ಜನಗಣತಿಯ ಪ್ರಕಾರ 5,000ಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಚದರ ಮೈಲಿಗೆ 1,000ಕ್ಕಿಂತ ಹೆಚ್ಚು ಜನಸಾಂದ್ರತೆ ಇರುವ ಹಾಗೂ 75% ಕ್ಕಿಂತ ಹೆಚ್ಚು ಪುರುಷರು ಕೃಷಿಯಲ್ಲದೆ ಇತರ ಉದ್ಯೋಗಗಳಲ್ಲಿ ತೊಡಗಿರುವ ಸಮುದಾಯಗಳೇ ನಗರಗಳು. ಈ ಲಕ್ಷಣಗಳನ್ನು ಪಡೆಯದಿರುವ ಚಿಕ್ಕ ಸಮಾಜಗಳು ಗ್ರಾಮೀಣ ಸಮಾಜಗಳು. ಬೇರೆ ದೇಶಗಳಲ್ಲೂ ಹೀಗೆಯೇ 25,00, 10,000, 20,000 ಜನರಿಗಿಂತ ಕಡಿಮೆ ಇರುವ ಸಮುದಾಯಗಳಷ್ಟು ಗ್ರಾಮೀಣ ಎಂದು ಕರೆಯುತ್ತಾರೆ. ಕೆಲವೊಮ್ಮೆ ಜನಸಾಂದ್ರತೆಯನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಇಂಥ ಮಾನದಂಡಗಳು ಗ್ರಾಮ ಸಮಾಜದ ಸ್ವರೂಪವನ್ನು ಸರಿಯಾಗಿ ಕೊಡಲಾರವು. ಹಾಗೆಯೇ ಗ್ರಾಮ ಮತ್ತು ನಗರ ಸಮಾಜಗಳ ಭೇದಗಳನ್ನು ಸರಿಯಾಗಿ ತಿಳಿಸಲಾರವು. ಗ್ರಾಮದ ವ್ಯಾಖ್ಯೆಗೆ 			(ನೋಡಿ- ಗ್ರಾಮ)

ಗ್ರಾಮಸ್ಥನ ಜಗತ್ತು ನಗರವಾಸಿಯ ಜಗತ್ತಿಗಿಂತ ಹಲವು ರೀತಿಗಳಲ್ಲಿ ಭಿನ್ನವಾಗಿದೆ. ಅನೇಕ ಸಮಾಜ ವಿಜ್ಞಾನಿಗಳು ಈ ಅಂತರಗಳನ್ನು ಮೊದಲಿನಿಂದಲೂ ಗುರುತಿಸುತ್ತ ಬಂದಿದ್ದಾರೆ. ಆದರೆ ಹೆಚ್ಚು ವ್ಯವಸ್ಥಿತವಾದ ವರ್ಗೀಕರಣವನ್ನು ಸೊರೊಕಿನ್ ಮತ್ತು ಜಿಮ್ಮರ್‍ಮನ್ 1929ರಲ್ಲಿ ಕೊಟ್ಟರು. ಅವರ ಪ್ರಕಾರ ಅನೇಕ ಭೌತಿಕ ಮತ್ತು ಸಾಮಾಜಿಕ ಆಧಾರಗಳ ಮೇಲಿಂದ ಈ ಎರಡು ಜಗತ್ತುಗಳನ್ನು ಪ್ರತ್ಯೇಕಿಸುವುದು ಸಾಧ್ಯ. ಕೃಷಿ ಗ್ರಾಮ ಸಮಾಜದ ಮುಖ್ಯ ಉದ್ಯೋಗವಾದರೆ ವಾಣಿಜ್ಯ ಯಾಂತ್ರಿಕ ಕಸಬುಗಳು, ಆಡಳಿತ ಮುಂತಾದವು ನಗರಸಮಾಜದ ಉದ್ಯೋಗಗಳು. ಗ್ರಾಮ ಸಮಾಜದ್ದು ನಿಸರ್ಗದ ಆವರಣ. ನಗರ ಸಮಾಜದ್ದು ಮಾನವ ಆವರಣ. ಗ್ರಾಮ ಸಮುದಾಯಗಳು ಗಾತ್ರದಲ್ಲಿ ಚಿಕ್ಕವು ; ನಗರದವು ದೊಡ್ಡವು. ಗ್ರಾಮಸಮಾಜದ ಜನಸಾಂದ್ರತೆ ವಿರಳ ; ನಗರದಲ್ಲಿ ಅಧಿಕ. ಗ್ರಾಮೀಣ ಜನ ಹೆಚ್ಚಾಗಿ ಒಂದೇ ಜನಾಂಗೀಯ ಹಾಗೂ ಮಾನಸಿಕ ಲಕ್ಷಣಗಳನ್ನು ಹೊಂದಿರುತ್ತಾರೆ. ನಗರವಾಸಿಗಳಲ್ಲಿ ವೈವಿಧ್ಯ ಬಹಳ. ಭಿನ್ನತೆಗಳು ನಗರಗಳಲ್ಲಿ ಅತಿ ಹೆಚ್ಚು. ಒಂದು ಪ್ರದೇಶದಿಂದ ಇನ್ನೊಂದಕ್ಕೆ, ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಸಂಚರಿಸುವುದು ಗ್ರಾಮ ಸಮಾಜದಲ್ಲಿ ಎಷ್ಟು ಅಸಾಧ್ಯವೋ ನಗರ ಸಮಾಜದಲ್ಲಿ ಅಷ್ಟು ಸಹಜ. ಗ್ರಾಮೀಣ ತನ್ನ ಕೆಲವೇ ಕೆಲವು ಒಡನಾಡಿಗಳೊಡನೆ ಸಂಬಂಧಗಳನ್ನು ಹೊಂದಿರುತ್ತಾನೆ. ಈ ಸಂಬಂಧಗಳು ಮುಖಾಮುಖಿಯೂ ವೈಯಕ್ತಿಕವೂ ಗಾಢವೂ ಇರುತ್ತದೆ. ನಗರವಾಸಿಯ ವಲಯ ವಿಶಾಲವಾದುದು. ಅಲ್ಲದೆ ಅವನ ಸಂಬಂಧಗಳು ಹೆಚ್ಚಾಗಿ ಔಪಚಾರಿಕವಾದವು, ತಾತ್ಕಾಲಿಕವಾದವು.

ಈ ವಿಭೇದಗಳನ್ನು ಪೂರ್ಣವಾಗಿ ಒಪ್ಪಲಾಗದು. ಅಲ್ಲದೆ, ಆಧುನಿಕ ಸಮಾಜ ವಿಜ್ಞಾನಿಗಳು ಸೂಚಿಸಿದಂತೆ ಇವು ಅಂಶಗಳಲ್ಲಿನ ಅಂತರಗಳೇ ಹೊರತು ಪ್ರಕಾರಗಳಲ್ಲಿನ ಮೂಲಭೂತ ಅಂತರಗಳಲ್ಲ. ನಗರ ಸಮಾಜದಲ್ಲೂ ಪ್ರಾಥಮಿಕ ಸಂಬಂಧಗಳ ಜಾಲಗಳನ್ನು ಈಗ ಹೆಚ್ಚು ಹೆಚ್ಚಾಗಿ ಗುರುತಿಸಲಾಗುತ್ತಿದೆ. ಗ್ರಾಮ ಮತ್ತು ನಗರಗಳ ಜನಗಳಲ್ಲಿ ಪರಸ್ಪರ ವಿನಿಮಯ ಹೆಚ್ಚುತ್ತಿದೆ ಎಂಬುದೂ ಸತ್ಯ. ಸಾಂಪ್ರದಾಯಿಕ ಗ್ರಾಮಗಳಲ್ಲಿಯೂ ಕೃಷಿಯಲ್ಲದೆ ಇತರ ಉದ್ಯೋಗಗಳು ಹೆಚ್ಚಿವೆ. ಇದಕ್ಕಾಗಿ ಅಮೆರಿಕದ ಜನಗಣತಿಯಲ್ಲಿ ನಗರ, ಕೃಷಿಪ್ರಧಾನ ಗ್ರಾಮ ಹಾಗೂ ಕೃಷಿಯಲ್ಲದ ಇತರ ಉದ್ಯೋಗ ಪ್ರಧಾನ ಗ್ರಾಮ ಎಂಬ ಮೂರು ವಿಭೇದಗಳನ್ನು ಈಗ ಗುರುತಿಸಲಾಗುತ್ತಿದೆ. ನಗರಗಳಲ್ಲಿ ದುಡಿಯುವ ಜನ ಗ್ರಾಮಗಳಲ್ಲಿ ಮನೆಮಾಡಿಕೊಳ್ಳುವುದೂ ಕೆಲವು ದೇಶಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಗಾಗಿ ಗ್ರಾಮ ನಗರ ವಿಭೇದಗಳನ್ನು ಹಿಂದಿನಷ್ಟು ನಿಚ್ಚಳವಾಗಿ ಗುರುತಿಸುವುದು ಅಸಾಧ್ಯವಾಗಿದೆ. ಗ್ರಾಮವೆಲ್ಲಿ ಮುಗಿಯಿತು, ನಗರವೆಲ್ಲಿ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಇದಕ್ಕಾಗಿಯೇ ಇತ್ತೀಚೆಗೆ ಗ್ರಾಮ ನಗರ ಸಾಂತತ್ಯ ಈ ಎಂಬ ಕಲ್ಪನೆ ಬಳಕೆಗೆ ಬಂದಿದೆ. ಮುಖ್ಯ ನಗರ, ನಗರ, ಪಟ್ಟಣ, ಕಸಬ, ಗ್ರಾಮ, ಕೊಪ್ಪಲು, ಬಸ್ತಿ - ಇವೆಲ್ಲ ಸಾಮಾಜಿಕ ರೋಹಿತದಲ್ಲಿ ಒಂದರಲ್ಲೊಂದು ವ್ಯಾಪಿಸಿಕೊಂಡಿವೆ ಎಂದು ಸಮಾಜ ವಿಜ್ಞಾನಿಗಳ ಮತ.

ಕ್ರಿ. ಶ. ಸು. 1800ರಿಂದ ವಿಶ್ವಾದ್ಯಂತ ನಗರಗಳು ಬೆಳೆಯುತ್ತಿದ್ದರೂ ಇಂದಿಗೂ ಜನಸಂಖ್ಯೆಯ ಬಹುಪಾಲು ಗ್ರಾಮ ಸಮಾಜಕ್ಕೆ ಸೇರಿದೆ. 20,000ಕ್ಕಿಂತ ಕಡಿಮೆ ಜನರಿರುವ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆ 1800ರಲ್ಲಿ 97% ಇತ್ತು. ಅದು 1850ರಲ್ಲಿ 95% 1900 ರಲ್ಲಿ 90.8% ಹಾಗೂ 1950 ರಲ್ಲಿ 79% ಆಯಿತು. ಈ ಪ್ರಮಾಣ ಈಗ ಆಫ್ರಿಕದಲ್ಲಿ 91%, ಏಷ್ಯದಲ್ಲಿ 87%, ಮಧ್ಯ ಅಮೆರಿಕದಲ್ಲಿ 79% ಯೂರೋಪಿನಲ್ಲಿ 65% ಎಂದು ಅಂದಾಜಾಗಿದೆ. ಭಾರತದಲ್ಲಿ 5,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನೆಲೆಗಳಲ್ಲಿ 80.13% ಜನ ವಾಸಿಸುತ್ತಾರೆ. ಒಟ್ಟಿನಲ್ಲಿ ನಗರೀಕರಣ ಹೆಚ್ಚುತ್ತಿದ್ದರೂ ಗ್ರಾಮ ಸಮಾಜದ ಪ್ರಾಮುಖ್ಯ ಕುಗ್ಗಿಲ್ಲ. ಅಲ್ಲದೆ, ಗ್ರಾಮೀಣ ಜನತೆ ಹೆಚ್ಚಾಗಿ ಅಸಮೃದ್ಧ ದೇಶಗಳಲ್ಲಿರುವುದರಿಂದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದಲೂ ಗ್ರಾಮ ಸಮಾಜವನ್ನು ಸರಿಯಾಗಿ ತಿಳಿದಿಕೊಳ್ಳುವುದು ಅವಶ್ಯ. ಬದಲಾಗುತ್ತಿರುವ ಭಾರತೀಯ ಗ್ರಾಮ ಸಮಾಜವನ್ನು ಅನುಲಕ್ಷಿಸಿ ಹೇಳುವುದಾದರೆ ಈ ತಿಳಿವಳಿಕೆ ಈಗ ಎಂದಿಲ್ಲದ ಮಹತ್ತ್ವ ಪಡೆದಿದೆ.
ಐತಿಹಾಸಿಕವಾಗಿ ನೋಡಿದರೆ, ಗ್ರಾಮ ಸಮಾಜ ಮಾನವರ ಅತ್ಯಂತ ಮುಖ್ಯವಾದ ವಾಸಸ್ಥಾನ. ಮಾನವ ಸಮಾಜ ಗ್ರಾಮೀಣ ಸಮಾಜವೆಂಬ ತೊಟ್ಟಿಲಲ್ಲಿ ಆಡಿ ಬೆಳೆಯಿತೆಂದು ಹೇಳಿದರೆ ತಪ್ಪಲ್ಲ. ಎರಡನೆಯದಾಗಿ ಎಂದಿನಿಂದಲೂ ಅದು ನಮಗೆ ಆಹಾರ ಹಾಗೂ ಕಚ್ಚಾವಸ್ತುಗಳನ್ನು ಆಹಾರ ಸಾಮಗ್ರಿಗಳನ್ನು ಕೊಟ್ಟು ಪೋಷಿಸುತ್ತಿದೆ. ಇಂದಿನ ನಗರಗಳೂ ಈ ಭರವಸೆಯಿಂದಲೇ ಉಳಿದುಕೊಂಡಿವೆ. ಮೂರನೆಯದಾಗಿ ಹಿಂದಿನಿಂದಲೂ ಗ್ರಾಮಸಮಾಜ ನಗರಗಳಿಗೆ ಆಹಾರವನ್ನು ಮಾತ್ರವಲ್ಲ, ಜನಸಂಖ್ಯೆಯನ್ನು ಕೊಡುತ್ತ ಬಂದು ಅವನ್ನು ವೃದ್ಧಿಸಿದೆ. ನಾಲ್ಕನೆಯದಾಗಿ ವಿಶ್ವದ ನೈಸರ್ಗಿಕ ಸಂಪತ್ತನ್ನು ಕಾಪಾಡುವುದು ಗ್ರಾಮಸಮಾಜದ ವಿಶಿಷ್ಟ ಹೊಣೆ. ಐದನೆಯದಾಗಿ, ಸಾಮಾಜಿಕ ಸಂಕ್ರಾಂತಿ ಕಾಲಗಳಲ್ಲಿ ಗ್ರಾಮಸಮಾಜ ಎಲ್ಲರಿಗೂ ರಕ್ಷಣೆ ನೀಡಿದೆ. ಏಳನೆಯದಾಗಿ ಈಗಿನ ದಿನಗಳಲ್ಲಿ ನಗರವಾಸಿಗಳಿಗೂ ಆಶ್ರಯನೀಡಿ ತನ್ನ ಉಪಯುಕ್ತತೆಯನ್ನು ಹೆಚ್ಚಿಸಿಕೊಂಡಿದೆ. ಕೊನೆಯದಾಗಿ, ಮಾನವ ಸಂಸ್ಕøತಿಯ ತಿರುಳನ್ನು ರಕ್ಷಿಸಿ ಮುಂದುವರಿಸಿಕೊಂಡು ಹೋಗುವುದರಲ್ಲಿ ಮಹತ್ತ್ವದ ಪಾತ್ರವಹಿಸಿದೆ.

ಮೇಲೆ ಹೇಳಿದ ಗ್ರಾಮಸಮಾಜದ ಲಕ್ಷಣಗಳಿಗೂ ಕಾರ್ಯಗಳೂ ಕಳೆದ ಒಂದು ಶತಮಾನದಿಂದ ತೀವ್ರವಾಗಿ ಬದಲಾಗುತ್ತಿವೆಯೆಂದು ಹೇಳಬಹುದು. ಒಬ್ಬ ಸಮಾಜವಿಜ್ಞಾನಿ ಈ ಪರಿವರ್ತನೆಯನ್ನು ಗ್ರಾಮೀಣ ಕ್ರಾಂತಿ ಎಂದು ಕರೆದಿದ್ದಾನೆ. ಈ ಕ್ರಾಂತಿ ನವಶಿಲಾಯುಗದಲ್ಲಿ ಆದ ಕೃಷಿಯ ಆವಿಷ್ಕಾರದಂತೆಯೇ ಇಲ್ಲವೆ ನಗರ, ಬರೆವಣಿಗೆ ಹಾಗೂ ಲೋಹಗಳ ಆವಿಷ್ಕಾರದಂತೆಯೇ ಇಲ್ಲವೆ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ರಾಂತಿಯಂತೆಯೇ ಮಹತ್ತ್ವಪಡೆದಿದೆಯೆಂದು ಅವನ ಅಭಿಪ್ರಾಯ. ಸಾಂಪ್ರದಾಯಿಕ ಗ್ರಾಮಸಮಾಜಗಳು ಆಧುನೀಕರಣಕ್ಕೆ ಗುರಿಯಾಗುತ್ತಿವೆ. ಹಿಂದೆ ಉತ್ತರ ಅಮೆರಿಕ, ಇಂಗ್ಲೆಂಡ್, ಪಶ್ಚಿಮ ಯೂರೋಪಿನಲ್ಲಿ ಆದ ಬದಲಾವಣೆಗಳಿಗಿಂತ ತ್ವರಿತವಾಗಿ ಬೇರೆ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ನಗರ ಸಮಾಜದ ಕೆಲವು ಲಕ್ಷಣಗಳನ್ನೂ ಆಕರ್ಷಣೆಗಳನ್ನೂ ಗ್ರಾಮಸಮಾಜ ಸ್ವೀಕರಿಸುತ್ತಿದೆ ಎಂಬುದು, ಇಲ್ಲವೆ ನಗರೀಕರಣವಾಗುತ್ತಿದೆ ಎಂಬುದು ಪರಿವರ್ತನೆಯ ಒಂದು ಅಂಶ ಮಾತ್ರ. ಇದಕ್ಕಿಂತ ಮುಖ್ಯವಾದ ಅಂಶವೆಂದರೆ ಗ್ರಾಮ ನಗರ ಪ್ರಭೇದಗಳೇ ಮಾಯವಾಗುತ್ತಿರುವುದು. ವಿಜ್ಞಾನ ಮತ್ತು ತಾಂತ್ರಿಕತೆಯ ಬೆಳೆವಣಿಗೆಯೂ ಉಪಯೋಗವೂ ಸಾರ್ವತ್ರಿಕವಾದ ಮತ್ತೊಂದು ಬದಲಾವಣೆ. ಕ್ರಮೇಣ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಮಾರ್ಪಾಟುಗೊಂಡು ಹಣ ಮತ್ತು ಮಾರುಕಟ್ಟೆಗಳಿಗೆ ಪ್ರಾಮುಖ್ಯವಾಗಿರುವ ಆರ್ಥಿಕ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಎಲ್ಲೆಲ್ಲೂ ಗ್ರಾಮೀಣ ಸಮುದಾಯಗಳು ಸಾಮಾಜಿಕ ಕ್ರಾಂತಿಗೆ ಸನ್ನದ್ಧವಾಗಿ ನಿಂತಂತಿವೆ.

ಈ ಶತಮಾನದಲ್ಲಿ ಸಾಧಿಸಿದ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯೂ ಗ್ರಾಮಸಮಾಜದ ಮೇಲೆ ತನ್ನ ಪ್ರಭಾವವನ್ನು ಬೀರಿದೆ ಎಂಬುದು ನಿಸ್ಸಂಶಯದ ಮಾತು. ಈ ಪ್ರಭಾವದ ಪ್ರಮಾಣ ವಿವಿಧ ದೇಶಗಳಲ್ಲಿ ಬೇರೆ ಬೇರೆಯಾಗಿದೆ. ಭಾರತದಲ್ಲಿ ಯಾಂತ್ರೀಕೃತ ಕೃಷಿ ಇನ್ನೂ ಸಾಧ್ಯವಾಗಿಲ್ಲ. ಏಷ್ಯ ಮತ್ತು ಆಫ್ರಿಕದ ಅನೇಕ ಭಾಗಗಳಲ್ಲಿ ಅಗೆಯುವ ಕಡ್ಡಿ ಅಥವಾ ಪ್ರಾಚೀನ ನೇಗಿಲೊಂದನ್ನು ಬಿಟ್ಟೆರೆ ಬೇರೆ ಯಂತ್ರಗಳು ಇಲ್ಲ. ಒಂದು ಅಂದಾಜಿನ ಪ್ರಕಾರ ಜಗತ್ತಿನ ವ್ಯವಸಾಯದಲ್ಲಿ ಉಪಯೋಗಿಸುವ ಶಕ್ತಿಯ ಹತ್ತರಲ್ಲಿ ಒಂಬತ್ತು ಪಾಲು ಮನುಷ್ಯ ಹಾಗೂ ಪ್ರಾಣಿಗಳಿಂದಲೇ ಬರುತ್ತದೆ. ಸಾಂಪ್ರದಾಯಿಕ ಸಮಾಜಗಳು ಇಂದಿಗೂ ನಮ್ಮ ಜನಸಂಖ್ಯೆಯ 80%ನ್ನು ಕೃಷಿಯಲ್ಲೇ ತೊಡಗಿಸುತ್ತಿವೆ. ಹೀಗಿದ್ದರೂ ಇಂಗ್ಲೆಂಡಿನಂಥ ಕೆಲವು ದೇಶಗಳು ತಮ್ಮ ಕೆಲಸಗಾರರಲ್ಲಿ ನೂರರಲ್ಲೈದು ಭಾಗವನ್ನು ಮಾತ್ರ ಕೃಷಿಯಲ್ಲಿ ತೊಡಗಿಸಿದ್ದಾರೆ. ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿದ ಶ್ರಮಿಕರ ಸಂಖ್ಯೆ ಕ್ರಮೇಣ ಇಳಿಯುತ್ತ ಬಂದಿದೆ. ಕೃಷಿಯಿಂದ ಬಿಡುಗಡೆ ಹೊಂದಿದ ಜನರು ಬೇರೆ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಥವಾ ಕೆಲವೊಮ್ಮೆ ನಿರುದ್ಯೋಗಿಗಳಾಗುತ್ತಿದ್ದಾರೆ. ಇದೊಂದು ಸಾರ್ವತ್ರಿಕವಾದ ಒಲವು - ಯಾಂತ್ರಿಕ ಪ್ರಗತಿಯ ಇನ್ನೊಂದು ಪರಿಣಾಮವೆಂದರೆ ಕೃಷಿ ಉತ್ಪಾದನೆ ಹೆಚ್ಚಿದುದು. ಇದರಿಂದಾಗಿ ಮತ್ತಿಷ್ಟು ಜನ ಭೂಮಿಯಿಂದ ಬಿಡುಗಡೆಗೊಂಡು ನಗರವಾಸಿಗಳಾಗುವ ಸಂಭವ ಹೆಚ್ಚಿತು. ಆಧುನಿಕ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಗಳು ಗ್ರಾಮ-ನಗರ ವಿನಿಮಯವನ್ನು ಹೆಚ್ಚಿಸಿದುವು. ಹೊಸ ದೃಷ್ಟಿಕೋನಗಳನ್ನು ಬೆಳೆಸಲು ಸಹಕಾರಿಯಾದುವು. ಹೀಗಾಗಿ ಸಾಂಪ್ರದಾಯಿಕ ಗ್ರಾಮಸಮಾಜಗಳು ಹೊಸ ರೂಪವನ್ನು ತಳೆದವು.

ಸಾಂಪ್ರದಾಯಿಕ ಗ್ರಾಮೀಣ ಸಮಾಜದಲ್ಲಿ ಆರ್ಥಿಕ, ರಾಜಕೀಯ, ಧಾರ್ಮಿಕ, ಇತ್ಯಾದಿ ವಿಭಾಗಗಳನ್ನು ಮಾಡಿ ಹೇಳುವುದು ಕಷ್ಟ. ಒಕ್ಕಲಿಗನೇ ಧಾರ್ಮಿಕ ಮುಖಂಡನೂ ರಾಜಕೀಯ ಮುಂದಾಳೂ ವೈದ್ಯನೂ ಬಡಿಗನೂ ಇರುವುದು ಸಾಮಾನ್ಯ. ಸ್ವಯಂಪೂರ್ಣತೆಯೂ ಸಹಕಾರವೂ ಇಲ್ಲಿನ ಲಕ್ಷಣ. ಜನ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಕೃಷಿಮಾಡುವುದು ವಾಡಿಕೆ. ಐದರಲ್ಲಿ ನಾಲ್ಕು ಪಾಲು ಜನರು ಇಂಥ ಸಾಗುವಳಿ ಮಾಡುತ್ತಾರೆ. ಆದರೆ ಅನೇಕ ಪ್ರಭಾವಗಳಿಂದಾಗಿ, ಮುಖ್ಯವಾಗಿ ತಾಂತ್ರಿಕತೆ ಮತು ವೈಜ್ಞಾನಿಕ ಬೆಳವಣಿಗೆಯ ಪ್ರಭಾವಗಳಿಂದಾಗಿ, ಹಣ ಮತ್ತು ಪೇಟೆಗಳು ಮುಖ್ಯವಾಗಿರುವ ಹೊಸ ಅರ್ಥವ್ಯವಸ್ಥೆ ಎಲ್ಲೆಡೆಗಳಲ್ಲಿ ರೂಪುಗೊಳ್ಳುತ್ತಿದೆ. ಹಳೆಯ ಕಟ್ಟುಪಾಡುಗಳು, ಶ್ರಮವಿಭಜನೆಗಳು, ಮಾಯವಾಗುತ್ತಿವೆ. ಕಾರ್ಯಕ್ಷಮತೆ, ಲಾಭ, ವಿಶೇಷ ಪರಿಣತಿಗಳಿಗೆ ಮಹತ್ತ್ವ ದೊರಕುತ್ತಿವೆ. ಮುಂದುವರಿದ ದೇಶಗಳಲ್ಲಿ ಕೃಷಿ ಲಾಭದಾಯಕವಾಗಿದ್ದು ಕೃಷಿಕನ ವರಮಾನ ಏರುತ್ತಿದೆ. ಬೇರೆ ಉದ್ದಿಮೆಗಳಂತೆ ಕೃಷಿಯೂ ಒಂದು ಲಾಭಪ್ರದ ಉದ್ದಿಮೆಯಾಗಿ ಬೆಳೆಯುತ್ತಿದೆ.
ಈ ಬೆಳವಣಿಗೆಗಳು ಭಾರತದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಅಷ್ಟೇನೂ ನಿಚ್ಚಳವಾಗಿಲ್ಲ. ಅನ್ಯರಿಂದ ಆದ ಶೋಷಣೆ, ಗ್ರಾಮಕೈಗಾರಿಕೆಗಳು ನಾಶವಾದದ್ದು, ಒಕ್ಕಲುತನ ಪದ್ಧತಿಗಳಲ್ಲಿ ಹೊಸತನ್ನು ಅಳವಡಿಸಿಕೊಳ್ಳದೇ ಇದ್ದುದು ಮುಂತಾದ ಕಾರಣಗಳಿಂದ ಭಾರತದ ಆರ್ಥಿ ವ್ಯವಸ್ಥೆ ಇನ್ನೂ ಹೀನಾವಸ್ಥೆಯಲ್ಲಿ ಇದೆ. ಕೃಷಿಯೇ ಮುಖ್ಯ ಉದ್ಯೋಗವಾಗಿದ್ದರೂ ರಾಷ್ಟ್ರೀಯ ಉತ್ಪನ್ನದ ಅರ್ಧದಷ್ಟನ್ನು ಮಾತ್ರ ಅದುಗಳಿಸುತ್ತಿದೆ. ಗ್ರಾಮೀಣ ಋಣಗ್ರಸ್ತತೆಯೂ ವಿಪರೀತವಾಗಿದೆ.

ಭಾರತೀಯ ಗ್ರಾಮಸಮಾಜ ಸಾಕಷ್ಟು ಪುರಾತನವಾದ್ದು. ಅವಿಭಕ್ತಕುಟುಂಬ, ಜಾತಿಪದ್ಧತಿ, ಗ್ರಾಮಪಂಚಾಯತಿ ಜಾಜಮಾನಿ ಮೊದಲಾದ ವ್ಯವಸ್ಥೆಗಳು ಅದರ ಅವಿಭಾಜ್ಯ ಅಂಗಗಳಾಗಿದ್ದವು. ಸಮಾಜಜೀವನ ಸಹಕಾರ ಮತ್ತು ಸ್ವಯಂಪರಿಪೂರ್ಣತೆಯಿಂದ ಕೂಡಿತ್ತು. ಕೆಲವರು ಹೇಳುವಂತೆ ಗ್ರಾಮಗಳು ಗಣರಾಜ್ಯಗಳಾಗಿರಲಿ ಬಿಡಲಿ, ಅವು ಸುಮಾರು 8,000 ವರ್ಷಗಳಿಂದಲೂ ರಾಷ್ಟ್ರವನ್ನು ರಕ್ಷಿಸಿವೆ, ಸಂಸ್ಕøತಿಯನ್ನು ಉಳಿಸಿವೆ. ಪರಕೀಯ ಆಕ್ರಮಣಗಳು ಸಂಭವಿಸಿದಾಗಲೆಲ್ಲ ರಕ್ಷಣೆ ಒದಗಿಸಿವೆ. ಮೊಗಲರ ಕಾಲದವರೆಗೂ ಗ್ರಾಮಸಮಾಜ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿತ್ತು. ಆದರೆ ಬ್ರಿಟಿಷ್ ಪ್ರಭುತ್ವ ಮತ್ತು ಅದರೊಂದಿಗೆ ಬಂದ ವಿಜ್ಞಾನ ಮತು ತಾಂತ್ರಿಕತೆ ಭಾರತದ ಗ್ರಾಮಸಮಾಜದ ಬುನಾದಿಯನ್ನು ಅಲುಗಿಸಿದುವು. ಔದ್ಯೋಗೀಕರಣದಿಂದಾಗಿ ಹಿಂದಿನ ಗೃಹ ಕೈಗಾರಿಕೆಗಳು ನಶಿಸತೊಡಗಿದವು. ಗ್ರಾಮಸ್ಥ ತನಗೆ ಬೇಕಾದ ಬಟ್ಟೆ ಬರೆ, ವಿದ್ಯೆ, ಸಲಕರಣೆಗಳಿಗಾಗಿ ನಗರಗಳನ್ನು ಅವಲಂಬಿಸಿಕೊಳ್ಳುವಂತಾಯಿತು. ನಗರೀಕರಣದ ಪ್ರಭಾವದಿಂದ ಹಳ್ಳಿಯ ಹೊಲಗಳು ದುಡ್ಡಿದ್ದವರ, ಪಟ್ಟಣದ ವ್ಯಾಪಾರಸ್ಥರ ಸ್ವತ್ತಾದವು. ಗ್ರಾಮೀಣ ಕಾರ್ಮಿಕರು ಪಟ್ಟಣದವರಂತೆ ವರ್ತಿಸತೊಡಗಿದರು. ಒಂದು ನೆರೆಹೊರೆ ಎಂಬುದನ್ನು ಬಿಟ್ಟರೆ ಇಂದಿನ ಗ್ರಾಮ ಹಿಂದಿನ ಗ್ರಾಮವಾಗಿ ಉಳಿದಿಲ್ಲ. ಸಮಾಜದ ಭದ್ರ ತಳಹದಿಯಾಗಿದ್ದ ಕುಟುಂಬವೂ ಪಾಶ್ಚಾತ್ಯ ನಾಗರಿಕತೆಯ ಪ್ರಭಾವದಿಂದ ಬದಲಾಗುತ್ತಿದೆ. ಭೂಮಿ ಇಡೀ ಸಮುದಾಯದ್ದಲ್ಲ, ವ್ಯಕ್ತಿಯ ಖಾಸಗಿ ಆಸ್ತಿ ಎಂದು ಬ್ರಿಟಿಷರು ಮಾನ್ಯಮಾಡುತ್ತಲೇ ಗ್ರಾಮಸಮಾಜದ ತಳಹದಿಗೆ ಧಕ್ಕೆ ಬಂತು. ಭೂಮಾಲೀಕರು ಅನ್ಯತ್ರ ವಾಸಿಸುವುದೂ ಶೋಷಣೆ ನಡೆಸುವುದೂ ಸಾಮಾನ್ಯವಾಯಿತು.

ಹೊಸ ಅರ್ಥವ್ಯವಸ್ಥೆಯಿಂದ ಹಿಂದಿನ ಪರಸ್ಪರಾಶ್ರಯ ತಪ್ಪಿದೆ. ಹಿಂದೆ ಉತ್ತರ ಭಾರತದ ಜಾಜಮಾನಿ ಪದ್ಧತಿಯಂತೆ ಕೃಷಿಕ ತನಗೆ ಬೇಕಾದ ಅನೇಕ ಸೇವೆಗಳಿಗಾಗಿ ಬ್ರಾಹ್ಮಣ, ಕಮ್ಮಾರ, ಬಡಗಿ, ಕ್ಷೌರಿಕ ಮುಂತಾದವರ ಸಹಾಯ ಕೋರುತ್ತಿದ್ದ. ಬ್ರಾಹ್ಮಣ, ಕಮ್ಮಾರ ಮತ್ತಿತರು ಯಜಮಾನನಾದ ಕೃಷಿಕನಿಂದ ಗೊತ್ತುಮಾಡಿದ ಪ್ರತಿಫಲ ಪಡೆಯುತ್ತಿದ್ದರು. ಬಡಗ ಆದಿವಾಸಿಗಳು ಅನ್ನ ಉತ್ಪಾದಿಸಿ ಕೊತ ಜನರಿಗೆ ಆಹಾರ ಒದಗಿಸಿದರೆ, ಪ್ರತಿಫಲವೆಂದು ಕೊತರು ಬಡಗರಿಗೆ ಕೃಷಿ ಉಪಕರಣಗಳನ್ನೂ ಅಡಿಗೆಯ ಪಾತ್ರೆಗಳನ್ನೂ ಉತ್ಸವ ಸಮಾರಂಭಗಳಲ್ಲಿ ಸಂಗೀತವನ್ನೂ ಒದಗಿಸುತ್ತಿದ್ದರು. ಪರಸ್ಪರ ಸಹಕಾರ ಅಥವಾ ಅಸಹಕಾರ ದೊಡ್ಡ ಶಕ್ತಿಯೆನಿಸಿತ್ತು. ಆದರೆ ಈಗಿನ ಹಣ ಮತ್ತು ಮಾರುಕಟ್ಟೆಗಳು ಇವರನ್ನೆಲ್ಲ ಸ್ವತಂತ್ರರನ್ನಾಗಿಸಿವೆ. ಕರ್ನಾಟಕದ ಹಳೇಮಗ ಪದ್ಧತಿಯಾಗಲಿ, ಬಿಟ್ಟಿ ಮುಯ್ಯಿ ಮೊದಲಾದ ಆರ್ಥಿಕ ಸಮಾಜಿಕ ಪದ್ಧತಿಗಳಾಗಲಿ ಇಂದು ಉಳಿದಿಲ್ಲ. ಇವೆಲ್ಲ ಹಿಂದೆ ಗ್ರಾಮಸಮಾಜಕ್ಕೆ ಆಂತರಿಕ ಶಕ್ತಿಯನ್ನು ಒದಗಿಸುತ್ತಿದ್ದವು. ಅದೀಗ ಮಾಯವಾಗಿವೆ.

ಹೊಸ ಕಾನೂನುಗಳೂ ಈ ಪ್ರಕ್ರಿಯೆಯಲ್ಲಿ ಪರಿಣಾಮ ಬೀರಿವೆ. ಜಮೀನುದಾರಿ ನಿರ್ಮೂಲನ ಕಾನೂನು ಮತ್ತಿತರ ಭೂಕಾಯಿದೆಗಳು ಬರುತ್ತಲೇ ಚಿಕ್ಕವರೂ ಭೂಮಿಯ ಒಡೆಯರಾದರು. ಭೂಮಿ ಚೂರಾಗುತ್ತ ಬಂತು; ಸ್ತ್ರೀ ಮಾಲೀಕಳಾದಳು. ಹೀಗೆ ಅನೇಕ ಏರುಪೇರುಗಳಾದವು. ಗುಂಪಿನ ರಾಜಕೀಯ, ಗ್ರಾಮ ಪಂಚಾಯಿತಿ ಚುನಾವಣೆಗಳು ಹೊಸ ಸಮಸ್ಯೆಗಳನ್ನು ತಂದುವು. ಒಟ್ಟಿನಲ್ಲಿ ಗ್ರಾಮ ಜೀವನ ಕಲಕಿದಂತಾಗಿದೆ.
ಕಳೆದ ಒಂದೆರಡು ದಶಕಗಳಲ್ಲಿ ಗ್ರಾಮಪುನರ್ರಚನೆಯ ಯತ್ನ ಭರದಿಂದ ನಡೆದಿದೆ.
(ನೋಡಿ- ಗ್ರಾಮ-ಪುನರ್ರಚನೆ)								(ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ